Psalms 75

ನ್ಯಾಯಾಧೀಶನಾದ ದೇವರಿಗೆ ಸ್ತುತಿ

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಅಲ್ತಷ್ಖೇತೆಂಬ ರಾಗ; ಕೀರ್ತನೆ; ಹಾಡು; ಆಸಾಫನದು.

(ಕೀರ್ತ. 57)

1ದೇವರೇ, ಕೊಂಡಾಡುತ್ತೇವೆ;
ನಿನ್ನನ್ನು ಕೊಂಡಾಡುತ್ತೇವೆ. ನಿನ್ನ ನಾಮ ಮಹತ್ವವವನ್ನು ನೆನಪುಮಾಡಿಕೊಂಡು;
ನಿನ್ನ ಮಹತ್ಕಾರ್ಯಗಳನ್ನು ವರ್ಣಿಸುತ್ತೇವೆ.
2 ದೇವರು ನುಡಿದದ್ದು, <<ನಿಯಮಿತ ಕಾಲವು ಬಂದಾಗ,
ನಾನೇ ನೀತಿಯಿಂದ ತೀರ್ಪುಕೊಡುವೆನು.
3 ಎಲ್ಲಾ ನಿವಾಸಿಗಳೊಡನೆ ಭೂಮಿಯು ಕರಗಿ ಹೋದರೂ,
ಅದರ ಸ್ತಂಭಗಳನ್ನು ಸ್ಥಾಪಿಸುವವನು ನಾನೇ>> ಎಂಬುದು.
ಸೆಲಾ


4

ನಾನು ಹೆಮ್ಮೆಗಾರರಿಗೆ, <<ಕೊಚ್ಚಿಕೊಳ್ಳಬೇಡಿರಿ>> ಎಂದು;

ದುಷ್ಟರಿಗೆ, <<ನಿಮ್ಮ ಕೊಂಬುಗಳನ್ನು ಮೇಲೆತ್ತಬೇಡಿರಿ;
5 ಕೊಂಬುಗಳನ್ನು ಮೇಲೆತ್ತಬೇಡಿರಿ;
ಸೊಕ್ಕಿನಿಂದ ಮಾತನಾಡಬೇಡಿರಿ>> ಎಂದು ಹೇಳುವೆನು.
6 ಏಕೆಂದರೆ ಉದ್ಧಾರವು ಪೂರ್ವದಿಂದಾಗಲಿ, ಪಶ್ಚಿಮದಿಂದಾಗಲಿ,
ಅರಣ್ಯದಿಂದಾಗಲಿ ಬರುವುದಿಲ್ಲ.

7

ದೇವರೇ ನ್ಯಾಯಾಧೀಶನಾಗಿ ಒಬ್ಬನನ್ನು ತೆಗೆದು,

ಇನ್ನೊಬ್ಬನನ್ನು ಸ್ಥಾಪಿಸುತ್ತಾನೆ.
8 ಯೆಹೋವನ ಕೈಯಲ್ಲಿ ಪಾತ್ರೆ ಇದೆ;
ಅದು ಔಷಧಿಮಿಶ್ರವಾಗಿ ಉಕ್ಕುವ ದ್ರಾಕ್ಷಾರಸದಿಂದ ತುಂಬಿದೆ.
ಅದರಿಂದ ಹೊಯ್ದು ಹಂಚುತ್ತಾನೆ.
ಲೋಕದ ದುಷ್ಟರೆಲ್ಲರೂ ಅದರೊಳಗಿನ ಮಡ್ಡಿಯನ್ನು ಸಹ ಕುಡಿದು ಮುಗಿಸಬೇಕು.

9

ನಾನಾದರೋ ಸದಾ ವರ್ಣಿಸುವವನಾಗಿ,

ಯಾಕೋಬ ವಂಶದವರ ದೇವರನ್ನು ಸಂಕೀರ್ತಿಸುತ್ತಾ ವರ್ಣಿಸಿ ಹಾಡುವೆನು.
10 ದುಷ್ಟರ ಕೊಂಬುಗಳನ್ನೆಲ್ಲಾ ಮುರಿದುಬಿಡುವೆನು;
ಆದರೆ ನೀತಿವಂತರ ಕೊಂಬುಗಳನ್ನು ಉನ್ನತಮಟ್ಟಕ್ಕೆ ಎತ್ತಲ್ಪಡುವವು.

Copyright information for KanULB